ಭಾರತದಲ್ಲಿ ರಂಗಶಿಕ್ಷಣ ಶಾಲೆಗಳು
ರಾಷ್ಟ್ರೀಯ ನಾಟಕಶಾಲೆ : ಸ್ವಾತಂತ್ರ್ಯ ಸಿಕ್ಕಿದ ನಂತರ ನೆಹರೂ ಸರಕಾರ ಭಾರತದ ಸರ್ವತೋಮುಖ ಅಭಿವೃದ್ಧಿಯತ್ತ ಗಮನಕೊಡುವಾಗ ಅದರ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಮುಖಗಳಿಗೂ ಅಷ್ಟೇ ಪ್ರಾಮುಖ್ಯತೆಯನ್ನು ಕೊಟ್ಟಿತು. ಆಗ ಶಿಕ್ಷಣ, ಸಂಸ್ಕøತಿ ಹಾಗೂ ಮಾನವ ಸಂಪನ್ಮೂಲ ಇಲಾಖೆಗಳು ಪ್ರತ್ಯೇಕವಾಗಿದ್ದಿರಲಿಲ್ಲ, ಒಟ್ಟಿಗೆ ಇದ್ದವು, ಸಚಿವರಾಗಿದ್ದ ಮೌಲಾನಾ ಅಬ್ದುಲ್ ಕಲಮ್ ಆಜಾದ್ ಅವರು ದೇಶದ ಸಾಂಸ್ಕøತಿಕ ಸಂಗತಿಗಳಿಗೆ ಉತ್ತೇಜನ ಕೊಡುವ ಉದ್ದೇಶದಿಂದ ಸಾಹಿತ್ಯ, ಲಲಿತಕಲೆ ಹಾಗೂ ಸಂಗೀತ-ನಾಟಕ ಅಕಾಡೆಮಿಗಳನ್ನು ಪ್ರಾರಂಭಿಸಲು ಆಲೋಚಿಸಿದರು. ಈ ಯೋಜನೆಯ ರೂಪು-ರೇಷೆ ತಯಾರಿಸುವಲ್ಲಿ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಪ್ರಮುಖ ಪಾತ್ರವಹಿಸಿದ್ದರು. ಈ ಯೋಜನೆಯಂತೆ 1953ರಲ್ಲಿ ಮೊದಲು ಸಂಗೀತ-ನಾಟಕ ಅಕಾಡೆಮಿಯ ಸ್ಥಾಪನೆಯಾಯಿತು. ಕಮಲಾದೇವಿಯವರು, ಮೊದಲು ಕಾರ್ಯಾಧ್ಯಕ್ಷರಾಗಿ ಅನಂತರ ಅಧ್ಯಕ್ಷರಾಗಿ, ಅದರ ಸಾರಥ್ಯ ವಹಿಸಿಕೊಂಡರು. ಜಗತ್ತಿನ ಹಲವು ದೇಶಗಳಲ್ಲಿ ಸಂಚರಿಸಿ ಹಲವು ತೆರನ ಕುಶಲಕಲೆಗಳು ಮತ್ತು ರಂಗಕಲೆಗಳ ಪರಿಚಯ ಹೊಂದಿದ್ದು, ದೇಶದ ಸಾಂಸ್ಕøತಿಕ ಏಳಿಗೆಯಲ್ಲಿ ರಂಗಭೂಮಿಯ ಪಾತ್ರವು ಬಹುಮುಖ್ಯವಾದುದು ಎಂದು ಭಾವಿಸಿದ ಕಮಲಾದೇವಿಯವರಿಗೆ ಪಶ್ಚಿಮದ ದೇಶಗಳಲ್ಲಿರುವಂತೆ ನಮ್ಮ ದೇಶದಲ್ಲೂ ರಂಗಭೂಮಿಯ ತರಬೇತಿಗಾಗಿ ಒಂದು ಪ್ರತ್ಯೇಕ ನಾಟಕಶಾಲೆಯ ಅಗತ್ಯವಿದೆ ಅನ್ನಿಸಿತು. ಇದಕ್ಕೂ ಮೊದಲೇ ಅವರು `ಭಾರತೀಯ ನಾಟ್ಯಸಂಘವನ್ನು ಕಟ್ಟಿ ಬೆಳೆಸಿದ್ದರು. ಆ ಕುರಿತು ಪ್ರಧಾನಿ ನೆಹರೂ ಮತ್ತು ಆಜಾದ್‍ರೊಡನೆ ಚರ್ಚಿಸಿದರು. ಸರಕಾರದ ತೀರ್ಮಾನದವರೆಗೆ ಕಾಯದೆ, ಮೊದಲು 1958ರಲ್ಲಿ ಏಶ್ಯನ್ ಥಿಯೇಟರ್ ಇನ್‍ಸ್ಟಿಟ್ಯೂಟ್ ಸಂಸ್ಥೆಯನ್ನು ಹುಟ್ಟುಹಾಕಿದರು. 1959ರಲ್ಲಿ ಸಂಗೀತ-ನಾಟಕ ಅಕಾಡೆಮಿಯು ತನ್ನ ಅಂಗಸಂಸ್ಥೆಯಾಗಿ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾವನ್ನು ಸ್ಥಾಪಿಸಿತು; ಏಶ್ಯನ್ ಥಿಯೇಟರ್ ಇನ್‍ಸ್ಟಿಟ್ಯೂಟ್ ಇದರ ಜಂಟಿಸಂಸ್ಥೆಯಾಗಿದ್ದು ನಂತರ ಅವೆರಡೂ ಒಂದಾಗಿ ಸಂಸ್ಥೆಯ ಹೆಸರು `ದಿ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ಆ್ಯಂಡ್ ಏಶ್ಯನ್ ಥಿಯೇಟರ್ ಇನ್‍ಸ್ಟಿಟ್ಯೂಟ್ ಎಂದು ನಾಮಕರಣಗೊಂಡಿತು. 1959ರಲ್ಲಿ ಇಂಡಿಯಾದಲ್ಲಿ ಮೊದಲ ರಾಷ್ಟ್ರೀಯ ನಾಟಕಶಾಲೆ (ಎನ್.ಎಸ್.ಡಿ.) ಹುಟ್ಟಿಕೊಂಡಿತು. ನಂತರ, 1975ರಲ್ಲಿ ಇದರ ಹೆಸರು ದಿ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ಎಂದಾಯಿತು. ಸ್ವಾಭಾವಿಕವಾಗಿಯೆ, ದೇಶದ ರಾಜಧಾನಿಯಾದ ದೆಹಲಿಯಲ್ಲೇ ಇದರ ಸ್ಥಾಪನೆಯಾಯಿತು. ಈ ನಾಟಕಶಾಲೆಗೆ ಪ್ರತ್ಯೇಕ ಆಡಳಿತಾತ್ಮಕ ಸೊಸೈಟಿ ರಚಿಸಲ್ಪಟ್ಟು ಕ್ರಮೇಣ ಅದು ಸಂಗೀತ-ನಾಟಕ ಅಕಾಡೆಮಿಯಿಂದ ಬೇರೆಯಾಗಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸತೊಡಗಿತು. ಮೊದಲ ಕೆಲವು ವರ್ಷ ಕಮಲಾದೇವಿಯವರೇ ಅಧ್ಯಕ್ಷರಾಗಿದ್ದು ಅದರ ಅಡಿಪಾಯ ಗಟ್ಟಿಮಾಡಿದರು.

ಇಂಗ್ಲೆಂಡಿನಲ್ಲಿ ರಂಗಶಿಕ್ಷಣ ಪಡೆದುಬಂದ ಇಬ್ರಾಹಿಂ ಅಲ್ಕಾಜಿಯವರು ಸುಮಾರು ಹದಿನೇಳು ವರ್ಷಕಾಲ ಅದರ ನಿರ್ದೇಶಕರಾಗಿ ದುಡಿದು, ದೇಶದಲ್ಲಿ ರಂಗಶಿಕ್ಷಣಕ್ಕೊಂದು ಸುಸಂಬದ್ಧ ವ್ಯವಸ್ಥೆ, ಅಕಡೆಮಿಕ್ ಆದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಪಠ್ಯಕ್ರಮ ಮುಂತಾದವನ್ನು ರೂಪಿಸಿದರು. ಕಮಲಾದೇವಿಯವರ ನಂತರ ಇಂದಿರಾಗಾಂಧಿ, ಆದ್ಯ ರಂಗಾಚಾರ್ಯ ಮುಂತಾದ ಗಣ್ಯರು ಎನ್.ಎಸ್.ಡಿ.ಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ದುಡಿದಿದ್ದಾರೆ; ಹಾಗೂ ಅಲ್ಕಾಜಿಯವರ ನಂತರ ಬಿ.ವಿ. ಕಾರಂತ, ಶಂಭುಮಿತ್ರ, ರತನ್ ಥಿಯಾಮ್ ಮುಂತಾದ ಪ್ರಸಿದ್ಧ ರಂಗನಿರ್ದೇಶಕರುಗಳು ಅದರ ನಿರ್ದೇಶಕರಾಗಿ ದುಡಿದಿದ್ದಾರೆ. ಈ ರಾಷ್ಟ್ರೀಯ ನಾಟಕಶಾಲೆಯು ದೇಶದಲ್ಲಿ ಆಧುನಿಕ ರಂಗಭೂಮಿಯ ಬೆಳವಣಿಗೆಗೆ ಚಾಲಕಶಕ್ತಿಯಾಗಿ ಕೆಲಸಮಾಡಿದ್ದು ಮಾತ್ರವಲ್ಲದೆ, ದೇಶಾದ್ಯಂತ ಹೊಸ ರಂಗ ಚಳುವಳಿಯನ್ನು ಹುಟ್ಟುಹಾಕಿತು, ರಂಗ-ಅರಿವನ್ನು ಮೂಡಿಸಿತು ಮತ್ತು ಜಾಗತಿಕ ರಂಗಾವಿಷ್ಕಾರಗಳ ಅರಿವಿನೊಂದಿಗೆ ನಮ್ಮದೇ ಆದ ಸ್ವಕೀಯ ಸಂಸ್ಕøತಿಯ `ಭಾರತೀಯ ಎನ್ನಬಹುದಾದ ರಾಷ್ಟ್ರೀಯ ರಂಗಭೂಮಿಯ ಬಗೆಗಿನ ಆಲೋಚನೆಗಳಿಗೂ ದಾರಿಮಾಡಿಕೊಟ್ಟಿತು. ಇಲ್ಲಿ ಕಲಿತವರು ತಂತಮ್ಮ ಪ್ರಾಂತಗಳಿಗೆ ಹೋಗಿ ಅಲ್ಲಲ್ಲಿ ಆಯಾ ಭಾಷೆ - ಪ್ರಾಂತಗಳಲ್ಲಿ ಹೊಸ ರಂಗಸಂಸ್ಕøತಿಯ ಹುಟ್ಟಿಗೆ ಕಾರಣರಾದರು. ಮುಂದೆ ಆಯಾ ಭಾಷೆ - ಪ್ರಾಂತಗಳಲ್ಲೂ ಪ್ರತ್ಯೇಕ ಸ್ಥಳೀಯ ನಾಟಕಶಾಲೆಗಳು ಹುಟ್ಟಿಕೊಳ್ಳಲೂ ಈ ರಾಷ್ಟ್ರೀಯ ನಾಟಕಶಾಲೆ ಪ್ರೇರಕವಾಯಿತು.

ರಾಷ್ಟ್ರೀಯ ನಾಟಕಶಾಲೆಯು ನೀಡುವ ರಂಗಶಿಕ್ಷಣವು ಮೂರು ವರ್ಷಗಳ ಡಿಪ್ಲೊಮಾ ಕೋರ್ಸು. ಮೊದಮೊದಲು ಇದರಲ್ಲಿ ನಟನೆ, ನಿರ್ದೇಶನ ಮತ್ತು ಮಕ್ಕಳ ರಂಗಭೂಮಿ ಎಂಬ ಐಚ್ಛಿಕ ವಿಷಯಗಳಿದ್ದವು. ಅನಂತರ, ಮಕ್ಕಳ ರಂಗಭೂಮಿಯನ್ನು ಕೈಬಿಡಲಾಯಿತು, ನಿರ್ದೇಶನ ಅನ್ನುವ ಬದಲಿಗೆ ಅದನ್ನೊಳಗೊಂಡಿರುವ ವಿನ್ಯಾಸ ಎಂಬ ವಿಷಯವನ್ನು ಮುನ್ನೆಲೆಗೆ ತರಲಾಯಿತು. ಕ್ರಮೇಣ ಪಾಶ್ಚಿಮಾತ್ಯ ಶಿಸ್ತಿನ ರಂಗಭೂಮಿಯ ಅಧ್ಯಯನದ ಜೊತೆಗೆ ಭಾರತದ ಶಾಸ್ತ್ರೀಯ ಮತ್ತು ಪಾರಂಪರಿಕ ರಂಗಸಂಪ್ರದಾಯಗಳ ಅಧ್ಯಯನಕ್ಕೂ ಒತ್ತು ಕೊಡಲಾಯಿತು.
ರಾಷ್ಟ್ರೀಯ ನಾಟಕಶಾಲೆಯ ಸೊಸೈಟಿಯು ತನ್ನ ಸಂಸ್ಥೆಯಲ್ಲಿ ಕಲಿತ ನಟರ ತಂಡವನ್ನು ಸೇರಿಸಿಕೊಂಡು ನಾಡಿನಾದ್ಯಂತ ವೃತ್ತಿಪರ ಶಿಸ್ತಿನ ಪ್ರಯೋಗಗಳನ್ನು ನೀಡುವ ರೆಪರ್ಟರಿ ಸಂಸ್ಥೆಯೊಂದನ್ನು ಪ್ರಾರಂಭಿಸಿತು. ಈ ರೆಪರ್ಟರಿಯು ಹೊಸ ಹುರುಪಿನ ರಂಗಕರ್ಮಿಗಳ ಪ್ರಯೋಗಶೀಲತೆಗೆ ಒಂದು ನೆಲೆಯನ್ನೂ ಆಸರೆಯನ್ನೂ ನೀಡಿದ್ದು ಮಾತ್ರವಲ್ಲದೆ, ದೇಶಾದ್ಯಂತ ಇಂತಹ ಒಂದು ರಂಗರೆಪರ್ಟರಿ ಯೋಜನೆಯ ಕನಸನ್ನು ಬಿತ್ತಿತು. 
ಸ್ಕೂಲ್ ಆಫ್ ಡ್ರಾಮಾ, ತ್ರಿಶ್ಶೂರು : 1970ರ ದಶಕದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಮಾದರಿಯಲ್ಲೆ ದೇಶದ ಕೆಲವು ವಿಶ್ವವಿದ್ಯಾನಿಲಯಗಳು, ಕೆಲವು ಕಾಲೇಜುಗಳು ಹಾಗೂ ಕೆಲವು ಸಾಂಸ್ಕøತಿಕ ಸಂಘಟನೆಗಳು ರಂಗಶಿಕ್ಷಣ ಶಾಲೆಗಳನ್ನು ಪ್ರಾರಂಭಿಸಿದವು. ಅವುಗಳಲ್ಲಿ ಕೆಲವು ಮೂರು ವರ್ಷದ ಪದವಿ ಕೋರ್ಸುಗಳು ಮತ್ತು ಕೆಲವು ಎರಡು ಅಥವಾ ಒಂದು ವರ್ಷದ ಡಿಪ್ಲೊಮಾ ಕೋರ್ಸುಗಳು, ಕೆಲವು ಕಿರುಅವಧಿಯ ಸರ್ಟಿಫಿಕೇಟ್ ಕೋರ್ಸುಗಳು ಮತ್ತು ಕೆಲವು ಭಾನುವಾರದ ರಂಗಶಾಲೆಗಳು. ಈ ಎಲ್ಲ ರಂಗಶಾಲೆಗಳ ಸ್ಥಾಪನೆಯ ಹಿನ್ನೆಲೆಯಲ್ಲಿ ಆಯಾಯಾ ರಾಜ್ಯ ಅಥವಾ ಪ್ರಾಂತಗಳಲ್ಲಿ ಅದುವರೆಗೆ ಹವ್ಯಾಸಿ ನೆಲೆಯಲ್ಲಿ ರಂಗಚಳುವಳಿಗಳನ್ನು ನಡೆಸಿಕೊಂಡುಬಂದ ವ್ಯಕ್ತಿಗಳು ಅಥವಾ ಸಂಘಟನೆಗಳು ಪ್ರಧಾನ ಪಾತ್ರವಹಿಸಿದ್ದರು/ವು.
ಹೀಗೆ ಪ್ರಾರಂಭಗೊಂಡ ಒಂದು ಪ್ರಮುಖ ನಾಟಕಶಾಲೆ 1978ರಲ್ಲಿ ಸ್ಥಾಪನೆಯಾದ ಕೇರಳದ ತ್ರಿಶ್ಯೂರಿನಲ್ಲಿರುವ ಸ್ಕೂಲ್ ಆಫ್ ಡ್ರಾಮಾ. ಇದು ಕೋಳಿಕ್ಕೋಡು (ಕಲ್ಲಿಕೋಟೆ) ವಿಶ್ವವಿದ್ಯಾನಿಲಯ ಪ್ರಾರಂಭಿಸಿದ ನಾಟಕಶಾಲೆ. 1960-70ರ ದಶಕದಲ್ಲಿ ಕೇರಳದಲ್ಲಿ ನಾಟಕಕ್ಕಳರಿ ಚಳವಳಿಯ ಮೂಲಕ ಹೊಸ ರಂಗಸಂವೇದನೆಯನ್ನು ಹುಟ್ಟುಹಾಕಿದ, ಮಲಯಾಳಂನ ಪ್ರಮುಖ ನಾಟಕಕಾರರಾದ ಪ್ರೊ.ಜಿ.ಶಂಕರ ಪಿಳ್ಳೆಯವರು ಈ ನಾಟಕಶಾಲೆಯ ಹಿಂದಿನ ಚಾಲಕಶಕ್ತಿ ಮತ್ತು ರೂವಾರಿ.
ತ್ರಿಶ್ಶೂರು ಸ್ಕೂಲ್ ಡ್ರಾಮಾದ ನಾಟಕ ಕೋರ್ಸು ಮೂರು ವರ್ಷದ ಪದವಿ (ಬಿ.ಟಿ.ಎ) ಕೋರ್ಸು. ಒಟ್ಟು ಆರು ಸೆಮಿಸ್ಟರುಗಳಲ್ಲಿ ನಡೆಯುವ ಈ ಕೋರ್ಸಿನಲ್ಲಿ ಅಧ್ಯಯನದ ಕ್ರಮ - ಮೊದಲ ವರ್ಷ ಸಾಮಾನ್ಯ, ನಂತರದ ಎರಡು ವರ್ಷಗಳಲ್ಲಿ ನಟನೆ, ನಿರ್ದೇಶನ ಮತ್ತು ಮಕ್ಕಳ ರಂಗಭೂಮಿ ಎಂಬ ಮೂರು ಐಚ್ಛಿಕ ವಿಷಯಗಳು ಇರುತ್ತವೆ. ಸೆಮಿಸ್ಟರುಗಳ ಪ್ರಕಾರ, ಕ್ರಮವಾಗಿ - 1. ಭಾರತೀಯ ಅಭಿಜಾತ ರಂಗಭೂಮಿ, 2. ಪಾಶ್ಚಿಮಾತ್ಯ ಅಭಿಜಾತ ರಂಗಭೂಮಿ, 3. ಮಲಯಾಳಂ ರಂಗಭೂಮಿ, 4. ಆಧುನಿಕ ಭಾರತೀಯ ರಂಗಭೂಮಿ, 5. ಆಧುನಿಕ ಪಾಶ್ಚಿಮಾತ್ಯ ರಂಗಭೂಮಿ ಮತ್ತು 6. ಆಯ್ದ ರಂಗವಿಷಯವೊಂದರ ಕುರಿತು ಸಂಶೋಧನಾತ್ಮಕ ಪ್ರಬಂಧ ಮಂಡನೆ - ಹೀಗೆ ಇರುತ್ತದೆ. ಎಲ್ಲ ವಿಷಯಗಳಲ್ಲೂ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಅಧ್ಯಯನ, ಆಹ್ವಾನಿತ ಅತಿಥಿ ನಿರ್ದೇಶಕರಿಂದ ವಿಶೇಷ ನಾಟಕತಯಾರಿಗಳು ಮತ್ತು ಐಚ್ಛಿಕ ವಿಷಯಗಳಿಗೆ ಸಂಬಂಧಿಸಿದಂತೆ ಆಯಾ ವಿದ್ಯಾರ್ಥಿಗಳಿಂದ ಅಭ್ಯಾಸ ಪ್ರಯೋಗಗಳು ನಡೆಯುತ್ತವೆ.

ಸ್ಥಾಪನೆಯ ಮೊದಲಿನಿಂದ ಸುಮಾರು ಹತ್ತು ವರ್ಷ ಕಾಲ ಪ್ರೊ. ಜಿ. ಶಂಕರ ಪಿಳ್ಳೆಯವರು ಈ ಸಂಸ್ಥೆಯ ನಿರ್ದೇಶಕರಾಗಿ ದುಡಿದು ಶಾಲೆಯ ಚಟುವಟಿಕೆಗಳಿಗೆ ಒಂದು ಭದ್ರ ಬುನಾದಿ ಹಾಕಿದರು. ನಾಟಕಕ್ಕಳರಿ ಚಳುವಳಿಯ ಇನ್ನೋರ್ವ ರೂವಾರಿ ಪ್ರೊ. ಎಸ್. ರಾಮಾನುಜಂ ಅವರು ಹಲವು ವರ್ಷ ಈ ಸಂಸ್ಥೆಯ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಆನಂತರ ಪ್ರೊ.ವಯಲಾ, ಎನ್. ವಾಸುದೇವನ್ ಪಿಳ್ಳೆ ಮತ್ತು ಎಂ. ರಾಮಚಂದ್ರನ್‍ರವರು ಮುಖ್ಯಸ್ಥರಾಗಿ ದುಡಿದರು. ಈ ಸಂಸ್ಥೆಯು ವಿಶ್ವವಿದ್ಯಾಲಯದ ಆಡಳಿತದ ಚೌಕಟ್ಟಿನೊಳಗಡೆಯೇ ಕ್ಯಾಲಿಕಟ್ ಯೂನಿವರ್ಸಿಟಿ ಲಿಟ್ಲ್ ಥಿಯೇಟರ್ (ಕಲ್ಟ್) ಎಂಬ ರೆಪರ್ಟರಿಯನ್ನೂ ಕಟ್ಟಿ ನಡೆಸಿದ್ದು ವಿಶೇಷ. ಇತ್ತೀಚೆಗೆ, ಯುಜಿಸಿಯ ವಿಶೇಷ ಅನುದಾನ ಮತ್ತು ಶಿಫಾರಸಿನ ಪ್ರಕಾರ ಇಲ್ಲಿ ರಂಗಶಿಕ್ಷಣದಲ್ಲಿ ಸ್ನಾತಕೋತ್ತರ (ಎಂ.ಟಿ.ಎ.) ವಿಭಾಗವೂ ಪ್ರಾರಂಭವಾಗಿದೆ. ಜೊತೆಗೆ, ಸಂಗೀತ ಮತ್ತು ಲಲಿತಕಲೆಗಳ ಸ್ನಾತಕೋತ್ತರ ವಿಭಾಗಗಳೂ ಇಲ್ಲಿ ತೊಡಗಿದ್ದು, ಸಂಸ್ಥೆಯ ಹೆಸರು ಸ್ಕೂಲ್ ಆಫ್ ಡ್ರಾಮಾ ಆ್ಯಂಡ್ ಫೈನ್ ಆಟ್ರ್ಸ್ ಎಂದು ಬದಲಾಗಿದೆ.

ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು : ಕರ್ನಾಟಕದ ಮಲೆನಾಡು ಜಿಲ್ಲೆಯಾದ ಶಿವಮೊಗ್ಗದ ಒಂದುಚಿಕ್ಕ ಹಳ್ಳಿಯಾದ ಹೆಗ್ಗೋಡು (ಸಾಗರ ತಾಲೂಕು) ಜಗತ್ತಿನ ಸಾಂಸ್ಕøತಿಕ ಭೂಪಟದಲ್ಲಿ ಗುರುತಿಸಲ್ಪಟ್ಟದ್ದು ಈಗ ಒಂದು ಇತಿಹಾಸ. 1949ರಲ್ಲಿ ಊರ ಸಮುದಾಯದ ಹವ್ಯಾಸಿ ಸಾಂಸ್ಕøತಿಕ ಸಂಸ್ಥೆಯಾಗಿ ಸ್ಥಾಪನೆಯಾದ ನೀಲಕಂಠೇಶ್ವರ ನಾಟ್ಯಸೇವಾ ಸಂಘವು (ನೀನಾಸಮ್) ನಾಟಕ ಪ್ರದರ್ಶನ, ಪುಸ್ತಕ ಪ್ರಕಟಣೆ, ಚಲನಚಿತ್ರ ರಸಗ್ರಹಣ ಶಿಬಿರ, ನಾಟಕೋತ್ಸವ, ಚಲನಚಿತ್ರೋತ್ಸವ, ವಿಚಾರ ಗೋಷ್ಠಿಗಳು - ಹೀಗೆ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುತ್ತ ಬಂದು 1980ರಲ್ಲಿ ನೀನಾಸಮ್ ರಂಗಶಿಕ್ಷಣ ಕೇಂದ್ರ ಎಂಬ ಹೆಸರಿನಲ್ಲಿ ಒಂದು ನಾಟಕಶಾಲೆಯನ್ನು ಪ್ರಾರಂಭಿಸಿತು. ಕೆ.ವಿ. ಸುಬ್ಬಣ್ಣನವರ ಸಮಾಜಮುಖಿ ಚಿಂತನೆಯ ಫಲವಾಗಿ ಈ ರಂಗಶಿಕ್ಷಣ ಕೇಂದ್ರ ಹುಟ್ಟಿಕೊಂಡಿತು. ಕನ್ನಡದ ಉತ್ಯಾಹೀ ಯುವಕರಿಗೆ ರಂಗಕಲೆಗಳಲ್ಲಿ ಶಾಸ್ತ್ರೀಯವಾದ ತರಬೇತಿ ಕೊಡಬೇಕು; ರಂಗಭೂಮಿಯಂತಹ ಶಕ್ತಿಯುತ ಮಾಧ್ಯಮವನ್ನು ಪ್ರಸ್ತುತ ಭಾರತೀಯ ಸಂದರ್ಭಕ್ಕೆ ಹೊಂದುವಂತೆ ಒಗ್ಗಿಸಿಕೊಂಡು ಸಮೂಹ ಸಂಪರ್ಕವನ್ನು ಸಾಧ್ಯವಾಗಿಸಿಕೊಳ್ಳಬೇಕು; ಒಟ್ಟಿನಲ್ಲ ಕರ್ನಾಟಕದಾದ್ಯಂತ ರಂಗಭಾಷೆಯನ್ನು ಪರಿಚಯಿಸಿಕೊಂಡ ಹಾಗೂ ಅದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಒಂದು ತರುಣರ ಪಡೆ ನಿರ್ಮಾಣವಾಗಬೇಕು ಎಂಬಂತಹ ಕನಸುಗಳು ಈ ರಂಗಶಿಕ್ಷಣ ಕೇಂದ್ರದ ಸ್ಥಾಪನೆಗೆ ಪ್ರೇರಕವಾಗಿದ್ದವು.

ಇಲ್ಲಿನದು ಒಂದು ವರ್ಷದ ರಂಗಶಿಕ್ಷಣ ಡಿಪ್ಲೊಮಾ ಕೋರ್ಸು. ದೆಹಲಿಯ ರಾಷ್ಟ್ರೀಯ ನಾಟಕಶಾಲೆ ಮತ್ತು ಇತರ ವಿಶ್ವವಿದ್ಯಾಲಯಗಳ ರಂಗಪಠ್ಯಗಳನ್ನು ಆಧರಿಸಿ, ನಮ್ಮ ಆರ್ಥಿಕ ಸಾಮಾಜಿಕ ಸಂದರ್ಭಕ್ಕೆ ಹೊಂದುವಂತೆ, ಇಲ್ಲಿನ ಒಂದು ವರ್ಷದ ಪಠ್ಯಕ್ರಮವನ್ನು ರೂಪಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 9ರವರೆಗೆ ಸುಮಾರು 12ರಿಂದ 14 ಗಂಟೆಕಾಲ ಪಾಠ-ಪ್ರವಚನ-ತಾಲೀಮು-ಅಭ್ಯಾಸಗಳು ನಡೆಯುವ ಪೂರ್ಣಾವಧಿಯ ಪಠ್ಯವಿಧಾನದಲ್ಲಿ ರಂಗಭೂಮಿಗೆ ಸಂಬಂಧಿಸಿದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ವಿಷಯಗಳನ್ನು ಮಾತ್ರವಲ್ಲದೆ, ಇದಕ್ಕೆ ಸಂಬಂಧಿಸಿದಂತೆ ಕಾವ್ಯ, ಸಾಹಿತ್ಯ, ಚಲನಚಿತ್ರ ಮುಂತಾದ ವಿಷಯಗಳ ಕುರಿತೂ ಸೂಕ್ತ ಅನುಸಂಧಾನ ನಡೆಸಲಾಗುತ್ತದೆ. ಇಲ್ಲಿನ ಶಿಕ್ಷಣದಲ್ಲಿ ನಟನೆ, ನಿರ್ದೇಶನ ಮುಂತಾದ ಆಯ್ಕೆಯ ಸಂಗತಿಗಳಿಲ್ಲ. ನಮ್ಮ ಸಂದರ್ಭಕ್ಕೆ ಹೊಂದುವಂತೆ, ನಮ್ಮ ಅಗತ್ಯಕ್ಕೆ ತಕ್ಕಂತೆ ಇಲ್ಲಿ ಎಲ್ಲರೂ ರಂಗದ ಎಲ್ಲ ವಿಷಯಗಳನ್ನೂ ಅಭ್ಯಾಸ ಮಾಡಬೇಕು.

ಕೆ.ವಿ. ಸುಬ್ಬಣ್ಣನವರು ನೀನಾಸಮ್ ರಂಗಶಿಕ್ಷಣ ಕೇಂದ್ರದ ನಿರ್ದೇಶಕರಾಗಿ, ಚಿದಂಬರರಾವ್ ಜಂಬೆಯವರು ಪ್ರಾಂಶುಪಾಲರಾಗಿ ಇಲ್ಲಿನ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದರು. ಈಗ, ಅಕ್ಷರ ಕೆ.ವಿ. ಅವರು ನಿರ್ದೇಶಕರಾಗಿ ಹಾಗೂ ಕೆ.ಜಿ. ಮಹಾಬಲೇಶ್ವರ ಅವರು ಪ್ರಾಂಶುಪಾಲರಾಗಿ ಮುನ್ನಡೆಸಿಕೊಂಡುಹೋಗುತ್ತಿದ್ದಾರೆ.

1980ರಲ್ಲಿ ಪ್ರಾರಂಭವಾದ ಈ ಕೇಂದ್ರ ಮೊದಲ ಎರಡು ವರ್ಷ ಸ್ವಂತ ಆರ್ಥಿಕ ಬಲದ ಮೇಲೆ ನಡೆದಿತ್ತು; ಅನಂತರ ಎರಡು ವರ್ಷ ಕರ್ನಾಟಕ ಸರ್ಕಾರದ ಹಂಗಾಮಿ ಅನುದಾನದೊಂದಿಗೆ ಹಾಗೂ ಆಮೇಲೆ ಖಾಯಂ ಅಂಗೀಕಾರ ಅನುದಾನಗಳೊಂದಿಗೆ ನಡೆದುಕೊಂಡು ಬಂದಿದೆ. 1991ರಿಂದ ರಂಗಶಿಕ್ಷಣ ಕೇಂದ್ರದ ಪರೀಕ್ಷೆಗಳನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುತ್ತಿದ್ದು, ಉತ್ತೀರ್ಣರಾದ ಅಭ್ಯರ್ಥಿಗಳಿಗೆ `ಡಿಪ್ಲೊಮಾ ಇನ್ ಥಿಯೇಟರ್ ಆಟ್ರ್ಸ್ ಪದವಿಯನ್ನು ನೀಡಲಾಗುತ್ತಿದೆ. 
ಇಲ್ಲಿ ಕಲಿತ ಉತ್ಸಾಹೀ ತರುಣರಿಗೆ ಹೆಚ್ಚಿನ ಪ್ರಾಯೋಗಿಕ ಅನುಭವ ಹಾಗೂ ತಾತ್ಕಾಲಿಕ ಉದ್ಯೋಗದ ಅವಕಾಶಕ್ಕೆ ಅನುಕೂಲವಾಗಲೆಂದು ಹಾಗೂ ಕರ್ನಾಟಕದಾದ್ಯಂತ ವೃತ್ತಿಪರ ರಂಗಚಳುವಳಿಯನ್ನು ಬೆಳೆಸಲೆಂದು ನೀನಾಸಮ್ ಸಂಸ್ಥೆಯು 1985ರಲ್ಲಿ ನೀನಾಸಮ್ ತಿರುಗಾಟ ಎಂಬ ರೆಪರ್ಟರಿಯನ್ನು ಪ್ರಾರಂಭಿಸಿತು. ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ಅಧ್ಯಯನ ಮುಗಿಸಿದ ಯುವ ರಂಗಕರ್ಮಿಗಳು ಈ ರೆಪರ್ಟರಿಯಲ್ಲಿ ನಟರಾಗಿ ತಂತ್ರಜ್ಞರಾಗಿ ದುಡಿದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗಿದೆ.

ಇತರ ನಾಟಕಶಾಲೆಗಳು : ದೇಶದ ಹಲವು ವಿಶ್ವವಿದ್ಯಾಲಯಗಳು ರಂಗಶಿಕ್ಷಣದಲ್ಲಿ ಎರಡು ವರ್ಷದ ಸ್ನಾತಕೋತ್ತರ (ಎಂ.ಎ. ಡ್ರಾಮಾ) ಶಿಕ್ಷಣವನ್ನು ನೀಡುತ್ತಿವೆ. ಅವುಗಳಲ್ಲಿ ಮುಖ್ಯವಾದುವು - ಬೆಂಗಳೂರು ವಿಶ್ವವಿದ್ಯಾಲಯ, ಕಲ್ಲಿಕೋಟೆ ವಿಶ್ವವಿದ್ಯಾಲಯ, ಪಾಂಡಿಚೇರಿ ವಿಶ್ವವಿದ್ಯಾಲಯ, ಮಧುರೈ ವಿಶ್ವವಿದ್ಯಾಲಯ, ಕೊಲ್ಕೊತಾದ ವಿಶ್ವಭಾರತಿ ವಿಶ್ವವಿದ್ಯಾಲಯ, ಚಂಡೀಗಢ ವಿಶ್ವವಿದ್ಯಾಲಯ-ಮುಂತಾದವು. ಮೈಸೂರು, ಮುಂಬಯಿ, ಬನಾರಸ್, ಶ್ರೀನಗರ, ಅಹಮದಾಬಾದ್ ಮುಂತಾಗಿ ಹಲವು ಪಟ್ಟಣಗಳ ಕಾಲೇಜುಗಳ ಲಲಿತಕಲಾ ವಿಭಾಗಗಳು ಒಂದೆರಡು ವರ್ಷಗಳ ಅಥವಾ ಕಿರುಅವಧಿಯ ರಂಗಶಿಕ್ಷಣ ಕೋರ್ಸುಗಳನ್ನು ನಡೆಸುತ್ತ ಬಂದಿವೆ. ಲಕ್ನೋದ ಭರತೇಂದು ನಾಟ್ಯ ಅಕಾಡೆಮಿಯು ಎರಡು ವರ್ಷ ಅವಧಿಯ ನಾಟಕ ಡಿಪ್ಲೊಮಾ ಕೋರ್ಸನ್ನು ನಡೆಸಿಕೊಂಡುಬಂದಿದೆ. ಅಸ್ಸಾಂನ ಗುವಾಹಾತಿಯಲ್ಲಿ ನಾಲ್ಕು-ಐದು ವರ್ಷಗಳಿಂದೀಚೆಗೆ ಪ್ರಾರಂಭವಾದ ಸೀಗಲ್ ಥಿಯೇಟರ್ ಸ್ಕೂಲ್ ಎರಡು ವರ್ಷದ ರಂಗಶಿಕ್ಷಣ ಕೋರ್ಸನ್ನು ನಡೆಸುತ್ತಿದೆ. ಕರ್ನಾಟಕದವರೇ ಆದ ಭಾಗೀರಥಿ ಬಹಾರುಲ್ ಮತ್ತು ಅವರ ಪತಿ ಬಹಾರುಲ್ ಇಸ್ಲಾಮ್ ಅವರು ಈ ನಾಟಕಶಾಲೆಯನ್ನು ಸ್ಥಾಪಿಸಿ ನಡೆಸಿಕೊಂಡು ಬರುತ್ತಿದ್ದಾರೆ. 

ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ರಂಗಶಿಕ್ಷಣ ನೀಡುವ ನೀನಾಸಮ್ ರಂಗಶಿಕ್ಷಣ ಕೇಂದ್ರ ಮಾತ್ರವಲ್ಲದೆ, ಕಿರು ಅವಧಿಯ ರಂಗಶಿಕ್ಷಣ ನೀಡುವ ಕೆಲವು ಸಂಸ್ಥೆಗಳೂ ಇವೆ. ಬೆಂಗಳೂರಿನ (ಎ.ಎಸ್. ಮೂರ್ತಿಯವರ) ಅಭಿನಯ ತರಂಗ (ಭಾನುವಾರದ) ರಂಗಶಾಲೆ, ಸಾಣೇಹಳ್ಳಿ ಮಠ ಮತ್ತು ಚಿತ್ರದುರ್ಗ ಮಠಗಳು ಪ್ರಾರಂಭಿಸಿದ ರಂಗತರಬೇತಿ ಶಾಲೆಗಳು, ಮೈಸೂರಿನ ರಂಗಾಯಣವು ಪ್ರಾರಂಭಿಸಿದ ಭಾರತೀಯ ರಂಗಶಿಕ್ಷಣ ಕೇಂದ್ರ, ಕುಂದಾಪುರದ ಭಂಡಾರ್‍ಕಾರ್ಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರ ಮುಂತಾದವನ್ನು ಇಲ್ಲಿ ಹೆಸರಿಸಬಹುದು.
									(ವೆಂಕಟರಮಣ ಐತಾಳ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ